ಮೊಹಿಂದರ್ ಅಮರನಾಥ
 	ಭಾರತದ ಕ್ರಿಕೆಟ್ ಪಟು. ಮಾಜಿ ಆಟಗಾರ ಲಾಲಾ ಅಮರನಾಥ ಅವರ ದ್ವೀತಿಯ ಪುತ್ರ. ರಾಷ್ಟ್ರೀಯ ಪ್ರಮುಖ ಪಂದ್ಯಗಳಾದ ರಣಜಿ ಮತ್ತು ದುಲೀಪ್ ಟ್ರೋಫಿ ಪಂದ್ಯಗಳಲ್ಲಿ ವಿಜೃಂಭಿಸಿ ಸ್ವಸಾಮಥ್ರ್ಯದಿಂದ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡ ಅದ್ಭುತ ಅನುಭವಿ ಅಟಗಾರ. ಆತ್ಮವಿಶ್ವಾಸದಿಂದ ಬೌಲಿಂಗ್ ದಾಳಿಯನ್ನು ಎದುರಿಸಿ ನಿಪುಣತೆಯಿಂದ ಹೆಚ್ಚುಕಾಲ ಮೈದಾನದಲ್ಲಿ ನಿಂತು ಬ್ಯಾಟ್ ಮಾಡಬಲ್ಲ ಆಟಗಾರ.

1967 ರಿಂದ 74 ರ ತನಕ ಪಂಜಾಬ್ ಪರ ರಣಜಿ ಪಂದ್ಯಗಳಲ್ಲಿ ಅಡಿದ ಇವರು 1969-70ರಲ್ಲಿ ಭಾರತ-ಆಸ್ಟ್ರೇಲಿಯ ಕ್ರಿಕೆಟ್ ತಂಡಗಳ ನಡುವೆ ಮದರಾಸಿನಲ್ಲಿ ಜರಗಿದ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಮೊಹಿಂದರ್ ತನ್ನ ಚೊಚ್ಚಲ ಪಂದ್ಯವನ್ನಾಡಿ ಕ್ರೀಡಾಪ್ರೇಮಿಗಳ ಅಭಿಮಾನಕ್ಕೆ ಪಾತ್ರರಾದರು. ಇವರು ಮೀಡಿಯಮ್ ವೇಗದ ಬೌಲರ್ ಆಗಿ ತಂಡದಲ್ಲಿ ಸೇರ್ಪಡೆಗೊಂಡರು.

197-76 ವೆಸ್ಟ್ ಇಂಡೀಸ್ ತಂಡದ ಚಾರಿತ್ರಿಕ ವಿಜಯದಲ್ಲಿ ಇದರ ಪಾತ್ರ ಪ್ರಮುಖವಾದುದು. ಫೋರ್ಟ್ ಆಫ್ ಸ್ಪೇನ್‍ನಲ್ಲಿ ನಡೆದ ತೃತೀಯ ಟೆಸ್ಟನಲ್ಲಿ ವೆಸ್ಟ್‍ಇಂಡೀಸ್ ತಂಡ ಒಡ್ಡಿದ ಸವಾಲನ್ನು ಭಾರತೀಯ ತಂಡ ದಿಟ್ಟತನದಿಂದ ಎದುರಿಸಿತು. ಭಾರತ ಪ್ರಥಮ ವಿಕೆಟ್ ಕಳೆದುಕೊಂಡ ಅನಂತರ ಬಂದ ಅಮರನಾಥ್ ವೆಸ್ಟ್‍ಇಂಡೀಸ್‍ನವರ ವೇಗದ ಹಾಗೂ ಸ್ಪಿನ್ ದಾಳಿಯನ್ನು ಎದುರಿಸಿ ನಿಂತು ಗವಾಸ್ಕರ ಹಾಗೂ ಜಿ.ಆರ್ ವಿಶ್ವನಾಥ ಅವರ ಜೊತೆಗೂಡಿ ಅನುಕ್ರಮವಾಗಿ 108 ಮತ್ತು 159 ರನ್ನುಗಳ ಎರಡು ಮಹತ್ತ್ವದ ಶತಕದ ಜೊತೆಯಾಟ ನೀಡಿ, ಭಾರತೀಯ ತಂಡಕ್ಕೆ ವಿಜಯದ ಹಾದಿಯನ್ನು ಸುಗಮಗೊಳಿಸಿದರು. 1982-83ರಲ್ಲಿ ಪಾಕ್ ಮತ್ತು ವೆಸ್ಟ್ ಇಂಡಿಸ್ ವಿರುದ್ಧ ನಡೆದ ಕ್ರಿಕೆಟ್ ಸರಣಿಯಲ್ಲಿ ಮೊಹಿಂದರ್ ಮಿಂಚಿದರು. 1983ರ ವಿಶ್ವಕಪ್ ಚಾಂಪಿಯನ್ನರಾದ ಭಾರತೀಯ ತಂಡದ ಉಪನಾಯಕರಾಗಿದ್ದ ಅಮರನಾಥ್ ಆ ಪಂದ್ಯಗಳಲ್ಲಿ 29.62 ರನ್ನುಗಳ ಸರಾಸರಿಯಲ್ಲಿ 237 ರನ್ನು ಗಳಿಸಿದರು.

ಏರ್ ಇಂಡಿಯಾ ಸಂಸ್ಥೆಯ ಉದ್ಯೋಗಿಯಾದ ಅಮರ್‍ನಾಥ್ 1984ರಲ್ಲಿ ವಿಸ್ಡನ್ ಕ್ರಿಕೆಟ್ ಮತ್ತು ಅರ್ಜುನ ಕ್ರೀಡಾ ಪ್ರಶಸ್ತಿ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.									 
(ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ